ಕನ್ನಡ

ನಮ್ಮ ಬಗ್ಗೆ :

‘ಪಿಸುಮಾತು‘ ಸಂಸ್ಥೆಯು ಸುಮಾರು ೫೦ಕ್ಕೂ ಹೆಚ್ಚು ಜಾಲತಾಣಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ ಜಾಲತಾಣಗಳನ್ನು ನಿರ್ಮಿಸುವ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಕನ್ನಡಕ್ಕಾಗಿ ಕಿರು ಸೇವೆಯನ್ನಾದರೂ ಮಾಡಬೇಕೆಂಬ ಅಭಿಲಾಷೆಯಿಂದ ಈ ತಾಣವನ್ನು ನಿರ್ಮಿಸಲಾಗಿದ್ದು ಸಧ್ಯಕ್ಕೆ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಕನ್ನಡ ಯೂನಿಕೋಡ್‌ನಲ್ಲಿ ಬೆರಳಚ್ಚಿಸುವ ಎರಡು ತಾಣಗಳನ್ನು ವಿನ್ಯಾಸ ಗೊಳಿಸಲಾಗಿದೆ.

ಇದಲ್ಲದೇ ಇನ್ನೂ ಅನೇಕ ಯೋಜನೆಗಳು ನಮ್ಮ ಮುಂದಿದ್ದು ಹಂತ ಹಂತವಾಗಿ ಅವುಗಳನ್ನು ಪ್ರಸ್ತುತಪಡಿಸಲಾಗುವುದು.

ಕನ್ನಡದ ಬಗ್ಗೆ

ದ್ರಾವಿಡ ಭಾಷೆಗಳಲ್ಲಿ ಬಹಳ ಹಳೆಯದರಲ್ಲಿ ಒಂದಾದ ಕನ್ನಡ ಭಾಷೆ/ನುಡಿಯನ್ನು ಅದರ ವಿವಿಧ ರೂಪಗಳಲ್ಲಿ ಸುಮಾರು ೪೫ ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಾರೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು, ಹಾಗೂ ಕರ್ನಾಟಕ ರಾಜ್ಯದ ಅಧಿಕೃತ/ಸರಕಾರೀ ಭಾಷೆ.

ಬೆಳವಣಿಗೆ :

ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತುಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ. ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು.ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತ್ತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. ಕನ್ನಡದ ಭಾಷಾ ಪರಿಣತರು ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಅಭ್ಯಾಸ ಮಾಡಲು ಕೆಲವು ಕಾಲಮಾನಗಳನ್ನು ನಿರ್ಧರಿಸಿದ್ದಾರೆ.

ಕಳೆದ ಶತಮಾನದಲ್ಲಿ ಆಗಿರುವ ಅತಿವ್ಯಾಪಕವಾದ ಕನ್ನಡದ ಅಭಿವೃದ್ಧಿಯನ್ನು ಗಮನಿಸಿದರೆ ೨೦ನೆಯ ಶತಮಾನದಿಂದ ಈಚಿನ ಕಾಲವನ್ನು ಆಧುನಿಕ ಕನ್ನಡ ಎಂದು ಹೊಸ ಯುಗವಾಗಿ ಪರಿಗಣಿಸಬೇಕಾಗುತ್ತದೆ. ಕನ್ನಡ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನ ಪಡೆಯಲು ಅರ್ಹವಾಗಿದೆ. ಅಂತರ್ಜಾಲದಲ್ಲಿ ಕನ್ನಡ ಭಾಷೆಯನ್ನು ಯಥೇಚ್ಛವಾಗಿ ಉಪಯೋಗಿಸಲಾಗುತ್ತಿದೆ..

ಕನ್ನಡ ಭಾಷೆ ಮತ್ತು ಕನ್ನಡ ಅಂಕೆಗಳ ಬೆಳವಣಿಗೆ

ಕುಮುದೇಂದು ಮುನಿ ರಚಿಸಿದ ಸಿರಿಭೂವಲಯ ಗ್ರಂಥದ ಆಧಾರದಿಂದ ಕನ್ನಡ ಭಾಷೆ ಗುಪ್ತಭಾಷೆಯಾಗಿದ್ದಿತು(ಬ್ರಹ್ಮರ್ಷಿ ದೇವರಾತರ ಪ್ರಕಾರ ವೇದ ಕಾಲದಿಂದಲೂ ೪ ಗುಪ್ತ ಭಾಷೆಗಳಿವೆಯಂತೆ ಅದರಲ್ಲಿ ಕನ್ನಡ ಭಾಷೆಯೂ ಒಂದು ಎಂದು ಅನಿಸುತ್ತದೆ) ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಕುಮುದೇಂದು ಮುನಿಯು ತನ್ನ ಗ್ರಂಥದಲ್ಲಿ ಸಾಬೀತು ಮಾಡಿದ್ದಾರೆ.

ಉದಾಹರಣೆಗೆ:

ಣಿಚ್ಚವು ಹೊಸದಾಗಿರುವಂಕಾಕ್ಷರ ದಚ್ಚುಗಳೊಳಗೊಂಬತ್ತು ಣೊಚ್ಚಿತ್ತು ಬಿನ್ನತ್ತಾಗಿರುತರುವಂಕದ ಅಚ್ಚಕಾವ್ಯಕೆ ಸೊನ್ನೆಯಾದಿಮ್
ನುಣುಪಾದ ಸೊನ್ನೆಯ ಮಧ್ಯದೊಳ್ ಕೂಡಿಸೆ ಗಣಿತರ್ಗೆ ಲೆಕ್ಕವ ತರುವ ಅಣಿಯಾದ ಸೊನ್ನೆಗೆ ಮಣಿಯುತ ನಾನೀಗ ಗುಣಕರ್ಗೆ ಭೂವಲಯವನು
ವರುಷಭಾರತದೊಳು ಬೆಳಗುವೆತ್ತಿಹ ಕಾವ್ಯ ಕರುನಾಡ ಜನರಿಗನಾದಿ ಅರುಹನಾಗಮದೊಂದಿಗೆ ನಯ ಬರುವಂತೆ ವರಕಾವ್ಯವನ್ನು ಕನ್ನದಿಪೆ
ಪುರ ಜಿನನಾಥ ತನ್ನಂಕದೊಳ್ ಬ್ರಾಹ್ಮಿಗೆ ಅರವತ್ನಾಲ್ಕಕ್ಷರವಿತ್ತ ವರಕುವರಿಯರು ಸೌಂದರಿಗೆ ಒಂಬತ್ತನು ಕರುಣಿಸಿದನು ಸೊನ್ನೆ ಸಹಿತ
ಕನ್ನಡದೊಂದೆರಳ್ ಮೂರುನಾಲ್ಕೈದಾರು ಮುನ್ನ ಏಳೆಂಟೊಂಬತೆಂಬ ಉನ್ನತವಾದಂಕ ಸೊನ್ನೆಯಿಂ ಹುಟ್ಟಿತೆಂ ದೆನ್ನುವುದನು ಕಲಿಸಿದನು
ಸರ್ವಜ್ಞದೇವನು ಸರ್ವಾಂಗದಿಂ ಪೇಳ್ದ ಸರ್ವಸ್ವ ಭಾಷೆಯ ಸರಣಿಗೆ ಸಕಲವ ಕರ್ಮಾಟದಣುರೂಪ ಹೊಂದುತ ಪ್ರಕಟದ ಓಂದರೋಳ್ ಅಡಗಿ
ಹದಿನೆಂಟು ಭಾಷೆಯ ಮಹಾಭಾಷೆಯಾಗಲು ಬದಿಯ ಭಾಷೆಗಳೇಳುನೂರು ಹೃದಯದೊಳಡಗಿಸಿ ಕರ್ಮಾಟ ಲಿಪಿಯಾಗಿ ಹುದುಗಿದಂಕ ಭೂವಲಯ
ಪರಭಾಷೆಗಳೆಲ್ಲ ಸಂಯೋಗವಾಗಲು ಸರಸ ಶಬ್ದಾಗಮ ಹುಟ್ಟಿ ಸರವದು ಮಾಲೆಯಾದತಿಶಯ ಹಾರದ ಸರಸ್ವತಿ ಕೊರಳ ಆಭರಣ.

[ಕೃಪೆ : ವಿಕಿಪೀಡಿಯಾ]